ಶ್ರೀ ಜಿ. ವೆಂಕಟೇಶ್ ಶೆಣೈ
1920 ರಲ್ಲಿ ಸ್ಥಾಪನೆಯಾದ ನಮ್ಮ ಸಂಘವು 03-05-1999 ರಿಂದ ಪೂರ್ಣ ಪ್ರಮಾಣದ ಕಚೇರಿಯೊಂದಿಗೆ ಬ್ಯಾಂಕಿಂಗ್ ವ್ಯವಹಾರವನ್ನು ಕರ್ನಾಟಕ ಸಹಕಾರಿ ಸಂಘಗಳ ಕಾಯ್ದೆ 1959 ರಡಿಯಲ್ಲಿ ಪ್ರಾರಂಭಿಸಿತು.
ಸದಸ್ಯರೇ ಸಂಪೂರ್ಣ ಒಡೆತನ ಹೊಂದಿರುವ, ನಿರ್ವಹಿಸುವ ಮತ್ತು ನಿಯಂತ್ರಿಸುವ ಸ್ವಸಹಾಯ ಮತ್ತು ಪರಸ್ಪರ ನೆರವಿನ ಮೇಲೆ ಆಧಾರಿತವಾದ “ ಕರ್ನಾಟಕ ಸೌಹಾರ್ದ ಸಹಕಾರಿ ಕಾಯ್ದೆ 1997” ಕರ್ನಾಟಕದಲ್ಲಿ 01-01-2001 ರಿಂದ ಜಾರಿಗೆ ಬಂದಿತು. ನೂತನ ಕಾಯಿದೆಯನ್ನು ಸಮಗ್ರವಾಗಿ ಅಧ್ಯಯನ ನಡೆಸಿ 07-01-2003 ರಂದು ನಮ್ಮ ಸಂಘವನ್ನು ಸೌಹಾರ್ದ ಸಹಕಾರಿ ಕಾಯ್ದೆಗೆ ಪರಿವರ್ತಿಸಿ ನೂತನ ಕಾಯಿದೆಯಡಿ ನೋಂದಾಯಿಸಲಾಯಿತು.
ಯಶಸ್ವಿಯಾಗಿ ಶತಮಾನೋತ್ಸವ ಸಂಭ್ರಮವನ್ನು ಆಚರಿಸಿಕೊಂಡ, ಹಲವಾರು ಹಿರಿಯ ಸಹಕಾರಿಗಳು, ನಿರ್ದೇಶಕರು, ಅಧ್ಯಕ್ಷರು ಹಾಗೂ ಉಪಾಧ್ಯಕ್ಷರಾಗಿ ಸೇವೆ ಸಲ್ಲಿಸಿದ ಈ ಸಂಘದ ಅಧ್ಯಕ್ಷನಾಗುವ ಅವಕಾಶ ಅನಿರೀಕ್ಷಿತವಾಗಿ ನನಗೆ ಲಭಿಸಿದ್ದು ಸಂಸ್ಥಾಪಕರ ಆಶಯ ಹಾಗೂ ಶ್ರೀದೇವರ ಅನುಗ್ರಹವೆಂದು ಭಾವಿಸುತ್ತೇನೆ.
ಬದಲಾವಣೆ ಎಂಬುದು ಜಗದ ನಿಯಮ. ಅದು ನಿತ್ಯ ನಿರಂತರ. ನಾವು ಬದಲಾವಣೆಗಳನ್ನು ಸ್ವೀಕರಿಸುತ್ತಾ ಆರ್ಥಿಕ ಸ್ಥಿತಿಗತಿಗಳಿಗೆ ಹೊಂದಿಕೊಂಡು ನಡೆದಾಗ ಮಾತ್ರ ಮಾರುಕಟ್ಟೆಯಲ್ಲಿ ನಮ್ಮ ಅಸ್ತಿತ್ವವನ್ನು ಉಳಿಸಿಕೊಳ್ಳಲು ಸಾಧ್ಯ. ನಮ್ಮ ಸಂಘವು ಕಾಲ ಕಾಲಕ್ಕೆ ಎಲ್ಲಾ ಬದಲಾವಣೆಗಳಿಗೆ ಹೊಂದಿಕೊಂಡು ಬಂದಿರುವುದರಿಂದ ಇವತ್ತಿಗೂ ಪ್ರಗತಿಯತ್ತವೇ ದಾಪುಗಾಲು ಹಾಕುತ್ತಿದೆ.
ನಿರಂತರ ಬದಲಾಗುವ ಗ್ರಾಹಕರ ನಿರೀಕ್ಷೆಗಳಿಗೆ ಸ್ಪಂದಿಸಲು ನೂತನ ಅವಕಾಶ, ನೂತನ ತಂತ್ರಜ್ಞಾನ, ನೂತನ ಸೇವೆಗಳನ್ನು ಸಂಘದಲ್ಲಿ ಪ್ರಾರಂಭಿಸಲು ನಮ್ಮ ಸಂಘವು ಸದಾ ಸಿದ್ಧ್ದವಿದೆ. ಕಳೆದ 5 ವರ್ಷಗಳಿಂದ ಸಂಘವು ಕೋರ್ ಬ್ಯಾಂಕಿಂಗ್ ವ್ಯವಸ್ಥೆಯನ್ನು ಅಳವಡಿಸಿದ್ದು, ಸಂಘದ ಯಾವುದೇ ಶಾಖೆಯಿಂದ ವ್ಯವಹರಿಸಲು ಅವಕಾಶ ಕಲ್ಪಿಸಲಾಗಿದೆ.
“ವಸುದೈವ ಕುಟುಂಬಕಮ್’ ಎನ್ನುವ ಭವ್ಯ ಪರಂಪರೆಯನ್ನು ಹೊಂದಿರುವ ನಮ್ಮ ಸಂಘವು, ಕೇವಲ ಲಾಭ ಗಳಿಸುವ ಆರ್ಥಿಕ ಚಟುವಟಿಕೆಗಳಿಗೆ ಮಾತ್ರ ಸೀಮಿತವಾಗದೆ ಸಮಾಜದ ಬೆಳವಣಿಗೆಗೂ ಮಹತ್ತರ ಕೊಡುಗೆ ನೀಡುತ್ತಿದೆ.
ಸಂಘವು ಕಳೆದ 17 ವರ್ಷಗಳಿಂದ ಸಂಘದ ಸಂಸ್ಥಾಪಕರನ್ನು ಸ್ಮರಿಸುವ ಜೊತೆಗೆ ಸಹಕಾರವೂ ಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿ ಸೇವೆ ಸಲ್ಲಿಸಿದ 40 ಕ್ಕೂ ಅಧಿಕ ಗಣ್ಯರನ್ನು ಗುರುತಿಸಿ ಗೌರವಿಸಿದೆ. ವೈದ್ಯರ ದಿನಾಚರಣೆ, ಶಿಕ್ಷಕರ ದಿನಾಚರಣೆ, ಅಂಚೆ ದಿನಾಚರಣೆ, ಮಹಿಳಾ ದಿನಾಚರಣೆಗಳನ್ನು ಯಶಸ್ವಿಯಾಗಿ ನಿರ್ವಹಿಸಿ ಸಮಾಜದ ಸಕಲ ವರ್ಗದ ಜನರ ಸೇವೆಯನ್ನು ಗುರುತಿಸಿ ಗೌರವಿಸಿದ ಹೆಮ್ಮೆ ನಮ್ಮ ಸಂಘದ್ದು. ಸಂಸ್ಥೆಯ ಸಹಭಾಗಿತ್ವದಲ್ಲಿ ನಡೆದ ಆಧಾರ್ ನೋಂದಣಿ ಮತ್ತು ತಿದ್ದುಪಡಿ ಶಿಬಿರ, ರಕ್ತದಾನ ಶಿಬಿರ, ನೇತ್ರ ಚಿಕಿತ್ಸಾ ಶಿಬಿರಗಳು, ಗ್ರಾಮ ಪಂಚಾಯತ್‌ನ ಬೀದಿ ದೀಪಗಳ ನಿರ್ವಹಣೆ ನಮ್ಮ ಸಂಘದ ಸೇವಾ ಕಾರ್ಯಗಳಲ್ಲಿ ಪ್ರಮುಖವಾದವು.
ಶಿಕ್ಷಣ ಕ್ಷೇತ್ರಕ್ಕೆ ನಮ್ಮ ಸಂಘದ ಸೇವೆ ನಿರಂತರ. ಪ್ರತಿ ಸಾಲಿನಲ್ಲಿ ಕಾರ್ಯವ್ಯಾಪ್ತಿಯ ಶಾಲಾ-ಕಾಲೇಜುಗಳು ಪ್ರತಿಭಾನ್ವಿತ ವಿದ್ಯಾರ್ಥಿಗಳನ್ನು, ಉತ್ತಮ ಶಿಕ್ಷಕರನ್ನು ಗುರುತಿಸಿ ಗೌರವಿಸುವುದರ ಜೊತೆಗೆ ವಿದ್ಯಾರ್ಥಿಗಳಿಗೆ ಉಪಯುಕ್ತವಾಗುವ ಪರೀಕ್ಷೆ ಎದುರಿಸುವ ಕಲೆ, ಪರೀಕ್ಷಾ ಸಿದ್ಧ್ದತೆ, ಸಮಯ ಪಾಲನೆ ಮುಂತಾದ ಶಿಬಿರಗಳನ್ನು ಯಶಸ್ವಿಯಾಗಿ ನಡೆಸಿದ ಕೀರ್ತಿ ನಮ್ಮ ಸಂಸ್ಥೆಗೆ ಸಲ್ಲುತ್ತದೆ.
ಸಹಕಾರ ಕ್ಷೇತ್ರದ ಹಿರಿಯ ಅಧಿಕಾರಿಗಳಾದ ಮೈಸೂರಿನ ಶ್ರೀ ಸಿ.ಎನ್.ಪರಶಿವಮೂರ್ತಿ, ಶಿವಮೊಗ್ಗದ ದಿ.ಶ್ರೀ.ಬಿ.ಎ.ಮಹದೇವಪ್ಪ, ಬೆಂಗಳೂರಿನ ಶ್ರೀ ಮಂಜುನಾಥ ಸಿಂಗ್‌ರಂತಹ ಸಹಕಾರದ ಜ್ಞಾನ ಭಂಡಾರಗಳಿಂದ ತರಬೇತಿ, ಮಾಹಿತಿ ಹಾಗೂ ಅನುಭವವನ್ನು ಪಡೆದ ನಮ್ಮ ಸಿಬ್ಬಂದಿಗಳು ನಿಜಕ್ಕೂ ಪುಣ್ಯವಂತರು.
ಸಂಘಕ್ಕೆ ರಾಜ್ಯ ಮಟ್ಟದ ಅತ್ಯುತ್ತಮ ಸಹಕಾರ ಸಂಘ ಪ್ರಶಸ್ತಿ, ಅಧ್ಯಕ್ಷರಿಗೆ ರಾಜ್ಯಮಟ್ಟದ ಶ್ರೇಷ್ಠ ಸಹಕಾರಿ, ಮುಖ್ಯ ಕಾರ್ಯನಿರ್ವಾಹಕರಿಗೆ ಅತ್ಯುತ್ತಮ ಕಾರ್ಯನಿರ್ವಾಹಕ ಗೌರವ ದೊರಕಿರುವುದು ನಮ್ಮ ಸಂಘದ ಸಾಧನೆಗೆ ಹಿಡಿದ ಕೈಗನ್ನಡಿಯಾಗಿದೆ.
ಕಳೆದ 25 ವರ್ಷಗಳಿಂದ ನಿರಂತರ ಲಾಭ ಗಳಿಸಿ ಸದಸ್ಯರಿಗೆ ಲಾಭಾಂಶ ನೀಡುತ್ತಿರುವ ಸಂಘವು ಕಳೆದ 3 ವರ್ಷಗಳಿಂದ 1 ಕೋಟಿಗೂ ಅಧಿಕ ಲಾಭ ಗಳಿಸುತ್ತಿದೆ. ಸಹಕಾರಿಯ ಬೆಳವಣಿಗೆಗೆ ಸದಸ್ಯರ ಭಾಗವಹಿಸುವಿಕೆ ಬಹಳ ಮುಖ್ಯವಾದದ್ದು. ಸಂಘದ ಬೆಳವಣಿಗೆಗೆ ಎಲ್ಲಾ ಸದಸ್ಯರ ಸಹಭಾಗಿತ್ವವನ್ನು ನಿರೀಕ್ಷಿಸುತ್ತಿದ್ದೇವೆ. ಸದಸ್ಯರಿಗೆ ನೀಡುತ್ತಿರುವ ಸೇವೆಯ ಗುಣಮಟ್ಟವನ್ನು ಹೆಚ್ಚಿಸಲು ಸದಸ್ಯರ ಸೃಜನಶೀಲ ಯೋಚನೆ ಹಾಗೂ ಕಲ್ಪನೆಗಳನ್ನು ನಾವು ಪ್ರೀತಿಪೂರ್ವಕವಾಗಿ ಗೌರವಿಸುತ್ತೇವೆ.
ಇದುವರೆಗೆ ಸಂಘದ ಬೆಳವಣಿಗೆಗೆ ಸಹಕರಿಸಿದ ಎಲ್ಲಾ ಸದಸ್ಯರಿಗೆ, ನಿರ್ದೇಶಕರಿಗೆ, ಮಾಜಿ ನಿರ್ದೇಶಕರಿಗೆ, ಪಿಗ್ಮಿ ಸಂಗ್ರಾಹಕರಿಗೆ ಹಾಗೂ ಸಿಬ್ಬಂದಿಗಳಿಗೆ ಪ್ರೀತಿಪೂರ್ವಕ ಅಭಿನಂದನೆಗಳನ್ನು ಸಲ್ಲಿಸುತ್ತೇನೆ.
ನನ್ನ ಅಧ್ಯಕ್ಷತೆಯಲ್ಲಿ ಮುಂದಿನ ದಿನಗಳಲ್ಲಿ ಕೈಗೊಳ್ಳಬಹುದಾದ ಎಲ್ಲಾ ಅಭಿವೃದ್ಧಿಪರ ಕಾರ್ಯಗಳಿಗೆ ತಮ್ಮೆಲ್ಲರ ತುಂಬು ಹೃದಯದ ಸಹಕಾರವನ್ನು ಬಯಸುತ್ತಿದ್ದೇನೆ.
*********** ಜೈ ಸಹಕಾರ ***********
ಶುಭಾಶಯಗಳೊಂದಿಗೆ
ಶ್ರೀ ಜಿ. ವೆಂಕಟೇಶ್ ಶೆಣೈ
(ಅಧ್ಯಕ್ಷರು)