ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯ ಕುಂದಾಪುರ ತಾಲೂಕಿನ ಉತ್ತರ ಭಾಗದಲ್ಲಿ ಪಂಚ ನದಿಗಳು ಹರಿದು ಪಶ್ಚಿಮದ ಅರಬ್ಬೀ ಸಮುದ್ರವನ್ನು ಸೇರುವ ಪ್ರಕೃತಿ ರಮಣೀಯವಾದ ಊರು ಪಂಚಗಂಗಾವಳಿ ಅಥವಾ ಗಂಗೊಳ್ಳಿ. ಸುಮಾರು 13,000 ಕ್ಕೂ ಅಧಿಕ ಜನಸಂಖ್ಯೆಯನ್ನು ಹೊಂದಿರುವ ಈ ಪುಟ್ಟ ಗ್ರಾಮ ಪ್ರತಿಷ್ಟಿತ ಗೌಡ ಸಾರಸ್ವತ ಬ್ರಾಹ್ಮಣ ಸಮಾಜದ 18 ಪೇಟೆಗಳಲ್ಲಿ ಒಂದು ಎಂದೆನಿಸಿದೆ. ಹಿಂದೆ ಗೋವಾದಲ್ಲಿ ನೆಲೆನಿಂತ ಗೌಡ ಸಾರಸ್ವತ ಬ್ರಾಹ್ಮಣರು ಅನೇಕ ಕಾರಣಗಳಿಂದ ಜೀವನೋಪಾಯಕ್ಕಾಗಿ ಕರಾವಳಿ ಕರ್ನಾಟಕದ ಆಶ್ರಯ ಪಡೆದದ್ದು ಇತಿಹಾಸ. ಏಂತಹಾ ಆಪತ್ಕಾಲದಲ್ಲಿಯೂ ದೇವರು ಹಾಗೂ ಧರ್ಮವನ್ನು ಬಿಡದೆ ಗೌರವದಿಂದ ಜೀವನವನ್ನು ನಡೆಸುತ್ತಾ ಆರ್ಥಿಕ, ಸಾಮಾಜಿಕ, ಸಾಂಸ್ಕ್ರತಿಕ, ಶೈಕ್ಷಣಿಕ ಹಾಗೂ ರಾಜಕೀಯ ಕ್ಷೇತ್ರಕ್ಕೆ ಅನನ್ಯ ಕೊಡುಗೆ ನೀಡಿದ ಹಿರಿಮೆ ಜಿ.ಎಸ್.ಬಿ. ಸಮಾಜದ್ದು. ಹೀಗೆ ವಿದ್ಯುಕ್ತ್ತವಾಗಿ ಆರಂಭಗೊಂಡ ಗಂಗೊಳ್ಳಿ ಕೋ-ಆಪರೇಟಿವ ಟೌನ್ ಬ್ಯಾಂಕನ ಕೆಲವೊಂದು ಸ್ವಾರಸ್ಯಕರ ಘಟನೆಗಳು ಇಂತಿವೆ.ಗಂಗೊಳ್ಳಿ ಟೌನ್ ಸೌಹಾರ್ದ ಕೋ-ಅಪರೇಟಿವ್ ಲಿ. ನ ಇತಿಹಾಸ
ಗಂಗೊಳ್ಳಿಯ ಜನತೆಗೆ ಈ ಜಿ.ಎಸ್.ಬಿ.ಸಮಾಜ ನೀಡಿದ ಅನನ್ಯ ಕೊಡುಗೆಗಳಲ್ಲೊಂದು ಗಂಗೊಳ್ಳಿ ಕೋ-ಆಪರೇಟಿವ ಟೌನ್ ಬ್ಯಾಂಕ್.
ಕಡಲ ತೀರದ ಪರಶುರಾಮಕ್ಷೇತ್ರ ಗಂಗೊಳ್ಳಿಯ ಭೀಷ್ಮ ದಿವಂಗತ ಏಚ್. ಲಕ್ಷ್ಮೀನಾರಾಯಣ ಕಾಮತರ ಪಡಸಾಲೆಯಲ್ಲಿ 22/11/1920 ರಂದು ನಡೆದ ಸಹಕಾರಿಗಳ ಸಭೆಯಲ್ಲಿ ಜನಿಸಿದ ಈ ಸಂಸ್ಠೆ ಜಿ.ಎಸ್.ಬಿ.ಸಮಾಜದ ಆರ್ಥಿಕ ಚಾಣಾಕ್ಷತೆಗೆ ಹಿಡಿದ ಕೈಗನ್ನಡಿಯಾಗಿದೆ. ಅಂದು ನಡೆದ ಸಭೆಯಲ್ಲಿ ಈ ಕೆಳಗಿನ ಆಡಳಿತ ಮಂಡಳಿಯನ್ನು ಆಯ್ಕೆ ಮಾಡಲಾಯಿತು.
ಎಚ್. ಲಕ್ಷ್ಮೀನಾರಾಯಣ ಕಾಮತ್
– ಅಧ್ಯಕ್ಷರು
ಗಂಗೊಳ್ಳಿ ಮರ್ತಪ್ಪ ನಾಯಕ್
– ಕಾರ್ಯದರ್ಶಿ
ಮಾರ್ಡಿ ಶೇಷಗಿರಿ ನಾಯಕ್
– ಅಸಿಸ್ಟಂಟ್ ಕಾರ್ಯದರ್ಶಿ
ಬೈಲೂರು ಮಂಜುನಾಥ ಶ್ಯಾನುಭಾಗ್
– ಸದಸ್ಯರು
ಗುಜ್ಜಾಡಿ ಮೂಡ್ಲಗಿರಿ ನಾಯಕ್
– ಸದಸ್ಯರು
ಗುಜ್ಜಾಡಿ ಸಾಂತಪ್ಪ ನಾಯಕ್
-ಸದಸ್ಯರು
ಗಂಗೊಳ್ಳಿ ಶ್ಯಾನುಭಾಗ್ ಗಣಪಯ್ಯ
-ಸದಸ್ಯರು
ಹೀಗೆ ಗಂಗೊಳ್ಳಿಯ ಜನತೆಯ ಆರ್ಥಿಕ ಸಂಕಷ್ಟಗಳಿಗೆ ಸ್ಪಂದಿಸುತ್ತಿದ್ದ ಬ್ಯಾಂಕಿನ ಅಭಿವೃದ್ಧಿ ಸಂಸ್ಥಾಪಕ ಎಚ್. ಲಕ್ಷ್ಮೀನಾರಾಯಣ ಕಾಮತರ ನಿಧನದ ತರುವಾಯ (1966) ಕುಂಠಿತಗೊಂಡಿತು.ಸದಸ್ಯರ ಠೇವಣಿಗಳನ್ನು ಹಿಂತಿರುಗಿಸಿ ಕೇವಲ ಪಾಲು ಬಂಡವಾಳದಲ್ಲೇ ಬ್ಯಾಂಕಿಂಗ್ ವ್ಯವಹಾರ ನಡೆಯುತ್ತಿತ್ತು.
1998 ರ ಅಂತ್ಯದಲ್ಲಿ ಬ್ಯಾಂಕಿಗೆ ಬೇಟಿ ನೀಡಿದ ಸಹಕಾರ ಸಂಘಗಳ ಜಂಟಿ ನಿಬಂದಕರು ಬ್ಯಾಂಕನ್ನು ಸಮಾಪನೆಗೊಳಿಸಬೇಕು ಅಥವಾ ಸ್ವಂತ ಕಚೇರಿ ಇತ್ಯಾದಿ ಮೂಲಭೂತ ಸೌಲಭ್ಯಗಳೊಂದಿಗೆ ಅಭಿವೃದ್ಧಿ ಪಡಿಸಬೇಕೆಂದು ಸೂಚಿಸಿ ಆದೇಶ ನೀಡಿದರು. ಆದೇಶದ ಪ್ರತಿಯನ್ನು ಸಾಮಾನ್ಯ ಸಭೆಯಲ್ಲಿ ಓದಿದಾಗ ಸದಸ್ಯರೆಲ್ಲರೂ ಸಂಸ್ಥೆಯನ್ನು ಅಭಿವೃದ್ಧಿ ಪಡಿಸುವ ಬಯಕೆ ವ್ಯಕ್ತಪಡಿಸಿ ಅನುಭವಿಗಳು, ಹಿರಿಯರೂ ಆಗಿರುವ ಬೈಲೂರು ಮಂಜುನಾಥ ಶೆಣೈಯವರ ಅಧ್ಯಕ್ಷತೆಯಲ್ಲಿ ನೂತನ ಆಡಳಿತ ಮಂಡಳಿಯನ್ನು ರಚಿಸಿ ಬ್ಯಾಂಕಿನ ಅಭಿವೃದ್ಧಿಗೆ ಚಾಲನೆ ನೀಡಿದರು.
ನೂತನ ಆಡಳಿತ ಮಂಡಳಿಯ ಪ್ರಯತ್ನದ ಫಲವಾಗಿ 03/05/1999 ರಂದು ಪೂರ್ಣಕಾಲಿಕ ಕಾರ್ಯದರ್ಶಿಯ ನೇಮಕವಾಗಿ 01/06/1999 ರಿಂದ ಗಂಗೊಳ್ಳಿಯ ಬಂದರ್ ರಸ್ತೆಯಲ್ಲಿರುವ ಪುಂಡಲೀಕ ಪೈಯವ ಕಟ್ಟಡದಲ್ಲಿ ಬ್ಯಾಂಕ್ ಕಾರ್ಯಾರಂಭ ಮಾಡಿತು. ಜನವರಿ 2000ದ ಆದಿಯಲ್ಲಿ ಪರಮಪೂಜ್ಯ ಕಾಶೀಮಠಾದೀಶ ಶ್ರೀ ಶ್ರೀ ಶ್ರೀ ಸುಧೀಂದ್ರ ತೀರ್ಥ ಸ್ವಾಮಿಜಿಯವರು ಫೆರ್ರಿ ರೋಡಿನಲ್ಲಿರುವ ಶ್ರೀ ಬಿ. ಮಂಜುನಾಥ ಶೆಣೈಯವರ ಕಟ್ಟಡದಲ್ಲಿ ಉದ್ಘಾಟನೆಗೊಳ್ಳಲಿರುವ ಬ್ಯಾಂಕಿನ ನೂತನ ಕಟ್ಟಡಕ್ಕೆ ಚಿತ್ತೈಸಿ ಆಶೀರ್ವಚನ ನೀಡಿದರು.
26/01/2000 ದಂದು ಮಣಿಪಾಲದ ಸಿಂಡಿಕೇಟ್ ಬ್ಯಾಂಕಿನ ಅಧ್ಯಕ್ಷರಾಗಿದ್ದ ಶ್ರೀ ಕೆ. ಕೆ. ಪೈಯವರು ನೂತನ ಕಟ್ಟಡದಲ್ಲಿ ಬ್ಯಾಂಕಿನ ಕಛೇರಿಯನ್ನು ವಿದ್ಯುಕ್ತವಾಗಿ ಉದ್ಘಾಟಿಸಿದರು. ಅಕ್ಟೋಬರ 2001ರಲ್ಲಿ ಗೋಕರ್ಣ ಮಠಾದೀಶ ಶ್ರೀ ಶ್ರೀ ಶ್ರೀ ವಿಧ್ಯಾಧಿರಾಜ ಶ್ರೀಪಾದ ವಡೆಯರ ಸ್ವಾಮಿಜಿಯವರು ಗಣಕಯಂತ್ರಗಳನ್ನು ಉದ್ಘಾಟಿಸಿದರು.
2003 ರಲ್ಲಿ ಸಹಕಾರಿಯು ಸೌಹಾರ್ದ ಕಾಯಿದೆಗೆ ಪರಿವರ್ತನೆಯಾಯಿತು. 2009 ರಲ್ಲಿ 23 ಸೆಂಟ್ಸ ವಿಸ್ತೀರ್ಣದ ಸ್ವಂತ ನಿವೇಶನವನ್ನು ಗಂಗೊಳ್ಳಿಯ ಮುಖ್ಯ ರಸ್ತೆಯಲ್ಲಿ ಖರೀದಿಸಲಾಯಿತು. 13/11/2010 ರಂದು ನಿವೃತ್ತ ಸಂಸ್ಕ್ರತ ಪ್ರಾಧ್ಯಾಪಕರಾದ ಶ್ರೀ ಕೆ. ರಾಮದಾಸ ಭಟ್ ರವರು ಸಹಕಾರಿಯ ಸ್ವಂತ ನಿವೇಶನದಲ್ಲಿ ಸುಸಜ್ಜಿತ 1,600 ಚದರ ಅಡಿ ವಿಸ್ತೀರ್ಣದ ಸ್ವಂತ ಕಟ್ಟಡವನ್ನು ಉದ್ಥಾಟಿಸಿದರು.