ಶ್ರೀ ಎಚ್. ಗಣೇಶ್ ಕಾಮತ್
ಸಹಕಾರ ಎಂದರೆ ಸಾಮಾನ್ಯ ಅರ್ಥದಲ್ಲಿ ಒಂದು ಕೆಲಸದಲ್ಲಿ ಒಬ್ಬರಿಗೆ ಇನ್ನೊಬ್ಬರು ನೆರವು ನೀಡುವುದು, ಕೂಡಿ ಕೆಲಸ ಮಾಡುವುದು. ಸಹಕಾರ ಶಬ್ದಕ್ಕೆ ಹೊಸ ಅರ್ಥ ವಿವರಣೆ ಅಗತ್ಯವಿಲ್ಲ. ಮಾನವ ಹುಟ್ಟಿನಿಂದಲೇ ಸಹಕಾರ ಮನೋಭಾವವನ್ನು ಮೈಗೂಡಿಸಿಕೊಳ್ಳ ದಿದ್ದಲ್ಲಿ ಬದುಕುವುದೇ ಕಷ್ಟವಾಗುವುದರಿಂದ ಮಾನವನ ದಿನನಿತ್ಯದ ಪ್ರತಿಯೊಂದು ಕಾರ್ಯಗಳಲ್ಲಿ ಇನ್ನೊಬ್ಬರ ಸಹಕಾರ ಇದ್ದೇ ಇರುತ್ತದೆ. ಹಾಗಾಗಿ ಮಾನವ ಸಂಘಜೀವಿ ಎಂದು ಹೇಳಲಾಗುತ್ತದೆ . ಭಾರತೀಯರಲ್ಲಿ ಸಹಕಾರವು ರಕ್ತಗತವಾಗಿದ್ದು ದೇಶದ ಅರ್ಥವ್ಯವಸ್ಥೆಯಲ್ಲಿ ಪ್ರಮುಖ ಪಾತ್ರ ವಹಿಸಿ ಜನರ ಜೀವನ ಪದ್ಧತಿಯಾಗಿ ಕಾರ್ಯನಿರ್ವಹಿಸುತ್ತಿದೆ.
ನೂರಾರು ವರ್ಷಗಳ ಇತಿಹಾಸವಿರುವ ಸಹಕಾರ ಕ್ಷೇತ್ರವು ಗಂಗೊಳ್ಳಿಗೆ 22-11-1920 ಗಂಗೊಳ್ಳಿಯ ಶ್ರೀ ಹಟ್ಟಿಯಂಗಡಿ ಲಕ್ಷ್ಮೀನಾರಾಯಣ ಕಾಮತರ ಪಡಸಾಲೆಯಲ್ಲಿ ಗಂಗೊಳ್ಳಿ ಕೋ-ಆಪರೇಟಿವ್ ಟೌನ್ ಬ್ಯಾಂಕ್ ನಿಯಮಿತದ ಸ್ಥಾಪನೆಯೊಂದಿಗೆ ಪಾದಾರ್ಪಣೆ ಮಾಡಿತು. 1920ರಿಂದ ಗಂಗೊಳ್ಳಿ ಪರಿಸರದ ಜನರ ಸಂಕಷ್ಟಗಳಿಗೆ ನೆರವಾಗಿದ್ದು. ಸಂಸ್ಥೆಯು ಸಂಸ್ಥಾಪಕ ಶ್ರೀ ಹಟ್ಟಿಯಂಗಡಿ ಲಕ್ಷ್ಮೀನಾರಾಯಣ ಕಾಮತರು ಸ್ವರ್ಗಸ್ಥರಾದ ಬಳಿಕ(1966) ತನ್ನ ವ್ಯವಹಾರವನ್ನು ಸಂಪೂರ್ಣವಾಗಿ ಸ್ಥಗಿತಗೊಳಿಸುವತ್ತ ಸಾಗಿತು. 1999 ರಲ್ಲಿ ಶ್ರೀ ಬೈಲೂರು ಮಂಜುನಾಥ ಶೆಣೈಯವರ ಅಧ್ಯಕ್ಷತೆಯಲ್ಲಿ ಆಯ್ಕೆಯಾದ ನೂತನ ಆಡಳಿತ ಮಂಡಳಿಯು ಮುಖ್ಯ ಕಾರ್ಯನಿರ್ವಾಹಕರ ನೇಮಕಾತಿ, ಪೂರ್ಣಪ್ರಮಾಣದ ಬ್ಯಾಂಕಿಂಗ್, ಲೆಕ್ಕಪತ್ರಗಳ ಗಣಕೀಕರಣ, ಸಿಂಪ್ಯೂಟರ್ ಮೂಲಕ ನಿತ್ಯನಿಧಿ ಠೇವಣಿ ಸಂಗ್ರಹ ಇತ್ಯಾದಿ ಸಹಕಾರಿಯ ಸಂಪೂರ್ಣ ಬೆಳವಣಿಗೆಗೆ ಅಗತ್ಯವೆನಿಸುವ ಪ್ರಮುಖ ನಿರ್ಣಯಗಳನ್ನು ಕಾರ್ಯರೂಪಕ್ಕೆ ತರುವ ಮೂಲಕ ಸಂಸ್ಥೆಯ ಅಭಿವೃದ್ಧಿಗೆ ವೇಗ ನೀಡಿತು.
2001ರಲ್ಲಿ ಸಹಕಾರಿ ಕ್ಷೇತ್ರವನ್ನು ಪುನರ್ ಸಂಘಟಿಸುವ ಮತ್ತು ಅವುಗಳನ್ನು ವ್ಯವಹಾರಿಕ ಹಾಗೂ ಆರ್ಥಿಕ ಸಂಘಟನೆಗಳು ಎಂದು ಗುರುತಿಸಿ ಖಾಸಗಿ ವಲಯದ ಸ್ಪರ್ಧೆ ಎದುರಿಸಿ ನಿಲ್ಲುವಂತಾಗಲು ಅನುವು ಮಾಡಿಕೊಡುವ ಸಲುವಾಗಿ ಕೇಂದ್ರ ಯೋಜನಾ ಆಯೋಗದ ಶಿಫಾರಸಿನ ಮೇರೆಗೆ ಕರ್ನಾಟಕ ರಾಜ್ಯ ಸೌಹಾರ್ದ ಸಹಕಾರಿ ಕಾಯಿದೆಯನ್ನು ರಚಿಸಿ ಜಾರಿಗೆ ತಂದಿತು. ಸೌಹಾರ್ದ ಸಹಕಾರಿ ಕಾಯ್ದೆಯ ಒಳಿತು-ಕೆಡುಕುಗಳ ಬಗ್ಗೆ ಸಮಗ್ರವಾಗಿ ಅಧ್ಯಯನ ನಡೆಸಿದ ಆಡಳಿತ ಮಂಡಳಿಯು 2003ರಲ್ಲಿ ಸಂಸ್ಥೆಯನ್ನು ಸೌಹಾರ್ದ ಸಹಕಾರಿಯಾಗಿ ಕುಂದಾಪುರದ ಸಹಕಾರ ಸಂಘಗಳ ಸಹಾಯಕ ನಿಬಂಧಕ ರಲ್ಲಿ ನೊಂದಾವಣಿ ಮಾಡಿಸಿತು.
2009ರಲ್ಲಿ 23 ಸೆಂಟ್ಸ್ ವಿಸ್ತೀರ್ಣದ ಸ್ವಂತ ನಿವೇಶನ ಖರೀದಿ 2010ರಲ್ಲಿ ಸುಸಜ್ಜಿತ 1600 ಚದರಡಿ ವಿಸ್ತೀರ್ಣದಲ್ಲಿ ಸಹಕಾರಿ ಕಾರ್ಯಾರಂಭ 2011ರಲ್ಲಿ ಸಾರ್ವಜನಿಕರ ಸೇವೆಗಾಗಿ ಇ-ಸ್ಟಾಂಪಿಂಗ್ ಸೇವಾ ಸೌಲಭ್ಯ, 2015ರಲ್ಲಿ 2 ಶಾಖೆಗಳ ಪ್ರಾರಂಭ, 2019ರಲ್ಲಿ ಆರ್.ಟಿ. ಸಿ. ಸೇವಾ ಸೌಲಭ್ಯ, 2020ರಲ್ಲಿ ಸಹಕಾರಿಯ ಶತಮಾನೋತ್ಸವ ಸೌಧ ನಿರ್ಮಾಣ ಇವೆಲ್ಲವೂ ಪ್ರಮುಖ ಮೈಲಿಗಲ್ಲುಗಳಲ್ಲಿ ಕೆಲವು. ಈ ಮೈಲಿಗಲ್ಲುಗಳನ್ನು ದಾಟಲು ಸಹಕರಿಸಿ, ಆಡಳಿತ ಮಂಡಳಿಗೆ ಶಕ್ತಿ ನೀಡಿ ಪ್ರೋತ್ಸಾಹ ನೀಡಿದ ಸಹಕಾರಿಯ ಎಲ್ಲಾ ಗೌರವಾನ್ವಿತ ಸದಸ್ಯರು, ಗಂಗೊಳ್ಳಿ, ಕೋಟೇಶ್ವರ ಹಾಗೂ ಉಪ್ಪುಂದ ಪರಿಸರದ ಸಹೃದಯೀ ನಾಗರೀಕರು, ಸೂಕ್ತ ಮಾರ್ಗದರ್ಶನ ನೀಡಿದ ಸಹಕಾರ ಇಲಾಖೆ ಮತ್ತು ಸಂಯುಕ್ತ ಸಹಕಾರಿಯ ಅಧಿಕಾರಿಗಳು ಹಾಗೂ ನಿಷ್ಠೆಯಿಂದ ಸೇವೆ ಸಲ್ಲಿಸುತ್ತಿರುವ ಸಹಕಾರಿ ಸಿಬ್ಬಂದಿಗಳು ನಿಜವಾಗಿಯೂ ಅಭಿನಂದನಾರ್ಹರು.
ಸಾರ್ವಜನಿಕರಿಗೆ ಅತ್ಯುತ್ತಮ ಬ್ಯಾಂಕಿಂಗ್ ಸೇವೆಯನ್ನು ಗ್ರಾಮದಲ್ಲಿ ನೀಡಬೇಕೆನ್ನುವ ಸದುದ್ದೇಶದಿಂದ ಸಂಸ್ಥಾಪಕರು1920 ರಲ್ಲಿ ಪ್ರಾರಂಭಿಸಿದ ಸಂಸ್ಥೆಗೆ ಕಾಶೀ ಮಠಾಧೀಶ ಶ್ರೀಮದ್ ಸುಧೀಂದ್ರತೀರ್ಥ ಶ್ರೀಪಾದಂಗಳವರು2000 ನೇ ಇಸವಿಯಂದು ಸಹಕಾರಿಯ ನೂತನ ಕಚೇರಿಯ ಉದ್ಘಾಟನೆಗೆ ಪೂರ್ವಭಾವಿಯಾಗಿ ಕಚೇರಿಗೆ ಭೇಟಿ ನೀಡಿ ಸಂಸ್ಥೆಯ ಅಭಿವೃದ್ಧಿಗೆ ಅನುಗ್ರಹಿಸಿದ್ದರು. ಗೋಕರ್ಣ ಮಠಾಧೀಶ ಶ್ರೀಮದ್ ವಿಧ್ಯಾಧಿ ರಾಜತೀರ್ಥ ಶ್ರೀಪಾದ ವಡೇರ್ ಸ್ವಾಮೀಜಿಯವರು 2001 ರಲ್ಲಿ ಗಣಕಯಂತ್ರಗಳನ್ನು ಉದ್ಘಾಟಿಸಿ ಅಶೀರ್ವದಿಸಿದರು. 2010ರಲ್ಲಿ ನಿವೃತ್ತ ಸಂಸ್ಕೃತ ಪ್ರಾಧ್ಯಾಪಕರು, ಗಂಗೊಳ್ಳಿಯ ಗೌಡ ಸಾರಸ್ವತ ಸಮಾಜಕ್ಕೆ ಮಾರ್ಗದರ್ಶಕರು, ಹಿರಿಯರಾದ ಶ್ರೀ ಕೋಟಾ ರಾಮದಾಸ ಭಟ್ ರವರು ಸಹಕಾರಿಯ ನೂತನ ಕಟ್ಟಡವನ್ನು ಉದ್ಘಾಟಿಸಿದರೆ, 2011ರಲ್ಲಿ ಕಾಶೀ ಮಠಾಧೀಶ ಶ್ರೀಮದ್ ಸಂಯಮೀಂದ್ರ ತೀರ್ಥ ಶ್ರೀಪಾದಂಗಳವರು ಇ-ಸ್ಟಾಂಪಿಂಗ್ ಸೌಲಭ್ಯವನ್ನು ಲೋಕಾರ್ಪಣೆ ಮಾಡಿ ಸಂಸ್ಥೆಗೆ ಆಶೀರ್ವದಿಸಿದರು. 2013 ರಲ್ಲಿ ಕೈವಲ್ಯ ಮಠಾಧೀಶ ಶ್ರೀಮದ್ ಶಿವಾನಂದ ಸರಸ್ವತಿ ಸ್ವಾಮೀಜಿಯವರು ಸಹಕಾರಿಯ ನೂತನ ವೆಬ್ ಸೈಟ್ ನ್ನು ಉದ್ಘಾಟಿಸಿ ಸಂಸ್ಥೆಗೆ ಶುಭಕೋರಿದರು. 2015 ಜನವರಿಯಲ್ಲಿ ಕಾಶೀಮಠಾದೀಶ ಶ್ರೀಮದ್ ಸಂಯಮೀಂದ್ರ ತೀರ್ಥ ಶ್ರೀಪಾದಂಗಳವರು ಕೋಟೇಶ್ವರ ಶಾಖೆಯನ್ನು ಉದ್ಘಾಟಿಸಿದರೆ, ಮೇ 2015ರಲ್ಲಿ ಗೋಕರ್ಣ ಮಠಾಧೀಶ ಶ್ರೀಮದ್ ವಿದ್ಯಾಧಿರಾಜ ತೀರ್ಥ ಶ್ರೀಪಾದ ವಡೇರ್ ಸ್ವಾಮಿಜಿಯವರು ಉಪ್ಪುಂದ ಶಾಖೆಯ ಉದ್ಘಾಟನೆಯನ್ನು ನೆರವೇರಿಸಿದರು.
ಈ ಎಲ್ಲಾ ಘಟನೆಗಳನ್ನು ಸೂಕ್ಷ್ಮವಾಗಿ ಅವಲೋಕಿಸಿದಾಗ ಸಹಕಾರಿಯ ಅಭಿವೃದ್ಧಿಗೆ ದೈವ ಬಲ, ಗುರುಗಳ ಆಶೀರ್ವಾದ ಮತ್ತು ಜನ ಬಲವಿರುವುದು ಸ್ಪಷ್ಟವಾಗುತ್ತದೆ. ಸಂತ್ರಪ್ತ ಸದಸ್ಯ, ಸಹಕಾರಿಯ ಬಗ್ಗೆ ಉಚಿತವಾಗಿ ಪ್ರಚಾರ ಮಾಡುವ ಪ್ರಚಾರಕ ಎಂಬುದು ನಮ್ಮ ಆಡಳಿತ ಮಂಡಳಿಯ ಅಭಿಪ್ರಾಯ. ಸಂಸ್ಥೆಗೆ ಭೇಟಿ ನೀಡುವ ಪ್ರತಿಯೊಬ್ಬ ಸದಸ್ಯರನ್ನು ಸ್ವಾಗತಿಸಿ ಅವರ ಅಗತ್ಯತೆಗಳಿಗೆ ತುರ್ತಾಗಿ ಸ್ಪಂದಿಸಿ ಅವರಿಗೆ ನೀಡುತ್ತಿರುವ ಗುಣಮಟ್ಟದ ಸೇವೆಯೇ ನಾವು ಸಹಕಾರ ಕ್ಷೇತ್ರಕ್ಕೆ ನೀಡುತ್ತಿರುವ ಗೌರವ.
ಸಹಕಾರ ಚಳುವಳಿ ಜನರ ಚಳುವಳಿ. ಸಹಕಾರಿ ವ್ಯವಸ್ಥೆ ಬಲಗೊಂಡು ಜನ ಸಾಮಾನ್ಯರ ಅಪೇಕ್ಷೆಗಳು ಈಡೇರಬೇಕಾದರೆ ಚಳುವಳಿಯ ಸಮಗ್ರ ಬೆಳವಣಿಗೆಗೆ ಪ್ರಯತ್ನಿಸಬೇಕು. ಚಳುವಳಿಯ ಬೆಳವಣಿಗೆ ಕುರಿತು ವ್ಯಾಪಕ ಅಧ್ಯಯನ, ಚಿಂತನೆ ನಡೆದು ಹೊಸ ಕಾರ್ಯಕ್ರಮಗಳನ್ನು ರೂಪಿಸಿ ಜಾರಿಗೊಳಿಸಬೇಕೆಂಬುದೇ ನಮ್ಮ ಆಡಳಿತ ಮಂಡಳಿಯ ಆಶಯ.
ಮುಂದಿನ ದಿನಗಳಲ್ಲಿ ನಮ್ಮ ಈ ಪ್ರಯತ್ನ ಮುಂದುವರಿಯಲು ನಿಮ್ಮೆಲ್ಲರ ತುಂಬು ಹೃದಯದ ಸಹಕಾರವನ್ನು ಕೋರುತ್ತಿದ್ದೇವೆ.
*********** ಜೈ ಸಹಕಾರ ***********
ಶ್ರೀ ಎಚ್. ಗಣೇಶ್ ಕಾಮತ್
ಅಧ್ಯಕ್ಷರು