ದಿನಾಂಕ 27-11-1976 ರಂದು ಗಂಗೊಳ್ಳಿಯ ಪ್ರತಿಷ್ಠಿತ ಶೆಣೈ ಕುಟುಂಬದ ಶ್ರೀ ಭಾಸ್ಕರ್ ವಿಠಲ್ ಶೆಣೈ ಹಾಗೂ ಶ್ರೀಮತಿ ಜಯಶ್ರೀ ಶೆಣೈ ದಂಪತಿಗಳ ಹಿರಿಯ ಪುತ್ರನಾಗಿ ಗಂಗೊಳ್ಳಿಯಲ್ಲಿ ಜನನ. ಪ್ರಾಥಮಿಕ, ಪ್ರೌಢ ಹಾಗೂ ಪದವಿ ಪೂರ್ವ ಶಿಕ್ಷಣವನ್ನು ಗಂಗೊಳ್ಳಿಯ ಸರಸ್ವತಿ ವಿದ್ಯಾಲಯ ಶಿಕ್ಷಣ ಸಂಸ್ಥೆಯಲ್ಲಿ ಪಡೆದು ಕುಂದಾಪುರದ ಭಂಡಾರ್ಕಾರ್ಸ್ ಕಾಲೇಜಿನಲ್ಲಿ ಬಿ.ಕಾಮ್ ಪದವಿಯನ್ನು ಪಡೆದಿರುತ್ತಾರೆ. ಪ್ರಸ್ತುತ ತಮ್ಮ ತಂದೆ-ತಾಯಿ, ಪತ್ನಿ ವೈಭವಿ , ಪುತ್ರ ವಜ್ರೇಶ್ ಪುತ್ರಿ ವರ್ಷಾ ಹಾಗೂ ಇಬ್ಬರು ಕಿರಿಯ ಸಹೋದರರ ಕೂಡು ಕುಟುಂಬದೊAದಿಗೆ ಗಂಗೊಳ್ಳಿಯಲ್ಲಿ ವಾಸವಾಗಿರುತ್ತಾರೆ.
ಪದವಿ ಬಳಿಕ ತಂದೆಯವರ ದಿನಸಿ ವ್ಯಾಪಾರದ ಜವಾಬ್ದಾರಿಯನ್ನು ವಹಿಸಿ ಇಂದು ದಿನಸಿ ವ್ಯಾಪಾರದ ಚಿಲ್ಲರೆ ಹಾಗೂ ರಖಮ್ ವಿಭಾಗದಲ್ಲಿ ಜಿಲ್ಲ್ಲೆಯಲ್ಲಿಯೇ ಮಂಚೂಣಿಯಲ್ಲಿರುವ ಶ್ರೀ ವೆಂಕಟೇಶ್ ಕೃಪಾ ಟ್ರೇಡರ್ಸ್ ನ ಮಾಲಕರಾಗಿರುತ್ತಾರೆ. ಕಳೆದ ೯ ವರ್ಷಗಳಿಂದ ಗಂಗೊಳ್ಳಿ ಟೌನ್ ಸೌಹಾರ್ದ ಕೊ-ಆಪರೇಟಿವ್ ಸೊಸೈಟಿ ಲಿಮಿಟೆಡ್ ನ ನಿರ್ದೇಶಕರಾಗಿ, ಕಳೆದ ಆಗಸ್ಟ್ ನಿಂದ ಅಧ್ಯಕ್ಷರಾಗಿ ಸೇವೆ ಸಲ್ಲಿಸುತ್ತಿದ್ದಾರೆ.
2020 ರಲ್ಲಿ ಗಂಗೊಳ್ಳಿ ಟೌನ್ ಸೌಹಾರ್ದ ಕೊ-ಆಪರೇಟಿವ್ ಸೊಸೈಟಿ ಲಿಮಿಟೆಡ್ನ ಶತಮಾನೋತ್ಸವ ಕಟ್ಟಡ ಸಮಿತಿಯ ಅಧ್ಯಕ್ಷರಾಗಿ ಸಂಘಕ್ಕೆ ಸುಂದರವಾದ ಎರಡು ಮಹಡಿಯ ಕಟ್ಟಡವನ್ನು ಅತೀ ಕಡಿಮೆ ಖರ್ಚಿನಲ್ಲಿ ನಿರ್ಮಾಣ ಮಾಡಿ ಸಂಸ್ಥೆಗೆ 20 ಲಕ್ಷಕ್ಕೂ ಅಧಿಕ ಮೊತ್ತವನ್ನು ಉಳಿಸಿ ಕೊಟ್ಟ ಕೀರ್ತಿ ಶ್ರೀಯುತ ಶೆಣೈಯವರಿಗೆ ಸಲ್ಲುತ್ತದೆ. ಸಂಘಕ್ಕೆ ನೂತನ ಧ್ವಜಸ್ತಂಭ ನಿರ್ಮಾಣ, ಸಂಘಕ್ಕೆ ಅತ್ಯುತ್ತಮ ಸಭಾಭವನ ಇತ್ಯಾದಿ ಆಧುನಿಕ ಸೌಲಭ್ಯಗಳನ್ನು ಒದಗಿಸಿದ ಕೀರ್ತಿ ಇವರಿಗೆ ಸಲ್ಲುತ್ತದೆ. ಸಾಮಾಜಿಕ ಕಾರ್ಯಗಳಿಗೂ ಶ್ರೀಯುತರ ಸೇವೆ ನಿತ್ಯ ನಿರಂತರ. ಗಂಗೊಳ್ಳಿಯಲ್ಲಿ ಶಿಕ್ಷಣ ಕ್ಷೇತ್ರಕ್ಕೆ ಕೊಡುಗೆ ನೀಡುತ್ತಿರುವ ಶ್ರೀ ಸರಸ್ವತಿ ವಿದ್ಯಾನಿಧಿಯ ಸಂಚಾಲಕರಾಗಿ, ಶ್ರೀ ರಾಘವೇಂದ್ರ ಸ್ಪೋರ್ಟ್್ಸ ಕ್ಲಬ್ ನ ಅಧ್ಯಕ್ಷರಾಗಿ ಗಂಗೊಳ್ಳಿಯ ಸಾರ್ವಜನಿಕ ಶ್ರೀ ಶಾರದೋತ್ಸವ ಸಮಿತಿಯ ಕೋಶಾಧಿಕಾರಿಯಾಗಿ, ಪದಾಧಿಕಾರಿಯಾಗಿ ಶ್ರಿಯುತ ಶೆಣೈಯವರು ಸೇವೆ ಸಲ್ಲಿಸಿರುತ್ತಾರೆ.
ತಮ್ಮ ವ್ಯವಹಾರ ಸ್ಥಳದಲ್ಲಿ ಪ್ರತಿ ವರ್ಷ ವಿಧ್ಯಾರ್ಥಿಗಳಿಗೆ ದೇಶಪ್ರೇಮದ ಕುರಿತ ಪ್ರಬಂಧ ಸ್ಪರ್ಧೆಯನ್ನು ಏರ್ಪಡಿಸಿ ನಗದು ಪುರಸ್ಕಾರ ನೀಡಿದ ಕೀರ್ತಿ ಶ್ರೀಯುತರಿಗೆ ಸಲ್ಲುತ್ತದೆ. ಸಾಮಾಜಿಕ, ಶೈಕ್ಷಣಿಕ,ಸಹಕಾರ ಮಾತ್ರವಲ್ಲದೆ ಧಾರ್ಮಿಕ ಕ್ಷೇತ್ರದಲ್ಲಿಯೂ ಶ್ರೀಯುತರು ಸೇವೆ ಸಲ್ಲಿಸುತ್ತಿದ್ದು ಗಂಗೊಳ್ಳಿ ಪರಿಸರದ ದೇವಸ್ಥಾನಗಳಲ್ಲಿ ಸ್ವಯಂ ಸೇವಕರಾಗಿ, ದಾನಿಗಳಾಗಿ ಸರ್ವರಿಂದಲೂ ಗುರುತಿಸಲ್ಪಟ್ಟಿರುತ್ತಾರೆ. ಶ್ರೀಯುತರ ಶೈಕ್ಷಣಿಕ ಅರ್ಹತೆ , ವ್ಯವಹಾರ ಕೌಶಲ್ಯ, ಪ್ರಾಮಾಣಿಕತೆ, ಬದ್ದತೆ , ಸೇವಾ ಹಾಗೂ ಸಹಕಾರ ಮನೋಭಾವ ಸಂಘದ ಅಧ್ಯಕ್ಷರಾಗಿ ಅವಿರೋಧವಾಗಿ ಆಯ್ಕೆಯಾಗುವಲ್ಲಿ ಪ್ರಮುಖ ಪಾತ್ರವಹಿಸಿದೆ.